ಚಂದ್ರಹಾಸ-
ಸಂಸ್ಕøತದಲ್ಲಿಯೂ ಕನ್ನಡದಲ್ಲಿಯೂ ಬಹು ಜನಪ್ರಿಯವಾಗಿರುವ ಒಂದು ಕಥೆಯ ನಾಯಕ. ಅಶ್ವಮೇಧದ ಪ್ರಕರಣವನ್ನು ವಿವರಿಸುವ ಸಂಸ್ಕøತ ಜೈಮಿನಿಯ ಭಾರತದಲ್ಲಿ ಚಂದ್ರಹಾಸನ ಕಥೆ ಒಂದು ಉಪಕಥೆಯಾಗಿ ಬರುತ್ತದಾದರೂ ಸಾಕಷ್ಟು ದೊಡ್ಡದಾಗಿ ಬರುತ್ತದೆ. ಲಕ್ಷ್ಮೀಶನಲ್ಲಿ ಕೂಡ ಈ ಕಥೆ ನಾಲ್ಕು ಆಶ್ವಾಸಗಳಷ್ಟು ವಿಸ್ತಾರವಾಗಿದೆ. ಲಕ್ಷ್ಮೀಶನ ಅನಂತರ ಕನ್ನಡದಲ್ಲಿ ಈ ಕಥೆಯನ್ನು ತೆಗೆದುಕೊಂಡು ಕೃತಿರಚನೆ ಮಾಡಿದವರು ಹೆಳವನಕಟ್ಟೆ ಗಿರಿಯಮ್ಮ ಮತ್ತು ಕುವೆಂಪು.  
ಚಂದ್ರಹಾಸ ಹುಟ್ಟಿನಲ್ಲಿ ರಾಜಪುತ್ರನಾದರೂ ಅದೃಷ್ಟಹೀನನಾಗಿ ಅನಾಥನಾಗಿ ದಾದಿಯೊಬ್ಬಳ ಆರೈಕೆಯಲ್ಲಿ ಬೆಳೆಯುತ್ತಾನೆ. ಪುರೋಹಿತ ಗಾಲವರು ಆ ಅನಾಥ ಬಾಲಕ ರಾಜನಾಗುವನೆಂಬ ಭವಿಷ್ಯ ನುಡಿಯುತ್ತಾರೆ. ರಾಜನಿಗೆ ಗಂಡು ಮಕ್ಕಳಿರಲಿಲ್ಲವಾದ್ದರಿಂದ ಮಂತ್ರಿಯಾದ ದುಷ್ಟಬುದ್ಧಿ ತನ್ನ ಮಗನಿಗೆ ಬರಬೇಕಾದ ಆ ರಾಜ್ಯಕ್ಕೆ ಈ ಅನಾಥ ಹುಡುಗ ಒಡೆಯನಾಗುವುದನ್ನು ಕೇಳಿ ಹೇಗಾದರೂ ಆತನನ್ನು ನಿರ್ಮೂಲಮಾಡುವ ಛಲಹೊಂದಿ ಕಟುಕರನ್ನು ನೇಮಿಸಿ ಅವನನ್ನು ಕೊಲ್ಲಲು ಯೋಚಿಸುತ್ತಾನೆ. ಶ್ರೀಹರಿಯನ್ನು ಸದಾ ಸ್ತುತಿಸುವ ಆ ಮುಗ್ಧ ಬಾಲಕನನ್ನು ಕೊಲ್ಲಲು ಮನಸ್ಸಿಲ್ಲದ ಕಟುಕರು ಗುರುತಿಗಾಗಿ ಅವನ ಒಂದು ಬೆರಳನ್ನು ಕೊಯ್ದು ತಂದು ತೋರಿಸುತ್ತಾರೆ. ಅರಣ್ಯದಲ್ಲಿ ರೋಧಿಸುತ್ತಿದ್ದ ಆ ಬಾಲಕನನ್ನು ಕುಳಿಂದಕ ಕರೆದುಕೊಂಡು ಹೋಗಿ ಸಾಕುತ್ತಾನೆ. ಚಂದ್ರಹಾಸ ಇನ್ನೂ ಬದುಕಿರುವುದನ್ನು ದುಷ್ಟಬುದ್ಧಿ ಮುಂದೆ ಕಾಣುತ್ತಾನೆ. ಅವನನ್ನು ಕೊನೆಗಾಣಿಸಬೇಕೆಂಬ ಛಲ ಮತ್ತೆ ಜಾಗೃತವಾಗುತ್ತದೆ. ಒಂದು ಪತ್ರದೊಂದಿಗೆ ಚಂದ್ರಹಾಸನನ್ನು ತನ್ನ ಮಗ ಮದನನಲ್ಲಿಗೆ ಕಳುಹಿಸುತ್ತಾನೆ. ಅದರಲ್ಲಿ ಈತನಿಗೆ 'ವಿಷವನ್ನು ಕೊಡುವುದು ಎಂದಿರುತ್ತದೆ. ದಾರಿಯಲ್ಲಿ ಬರುತ್ತ ಉಪವನ ಒಂದರಲ್ಲಿ ಚಂದ್ರಹಾಸ ವಿಶ್ರಮಿಸುತ್ತ ನಿದ್ದೆ ಹೋದಾಗ ಅಲ್ಲಿ ಬಂದ ದುಷ್ಟಬುದ್ಧಿಯ ಮಗಳು ವಿಷಯೆ 'ವಿಷ ಎಂಬುದನ್ನು 'ವಿಷಯೆ ಎಂದು ತಿದ್ದುತ್ತಾಳೆ. ಅದರ ಪರಿಣಾಮ ವಿಷಯೆ-ಚಂದ್ರಹಾಸರ ಮದುವೆಯಾಗುತ್ತದೆ. ಹಿಂದಿರುಗಿದ ದುಷ್ಟಬುದ್ಧಿಗೆ ದಿಗ್ಭ್ರಮೆಯಾಗುತ್ತದೆ. ಅಳಿಯನಾದರೂ ಶತ್ರು ಶತ್ರುವೇ, ದುಷ್ಟಬುದ್ಧಿ ತನ್ನ ಪ್ರಯತ್ನವನ್ನು ಬಿಡದೆ ಮತ್ತೊಂದು ವಿಷವ್ಯೂಹ ರಚಿಸುತ್ತಾನೆ. ಮನೆಯ ಸಂಪ್ರದಾಯದಂತೆ ಅಳಿಯನನ್ನು ಪೂಜಾಸಾಮಾಗ್ರಿಗಳೊಂದಿಗೆ ಚಂಡಿಕಾಲಯಕ್ಕೆ ಕಳುಹಿಸಿ, ಅಲ್ಲಿ ಅವನನ್ನು ಕೊಲ್ಲಲು ಚಂಡಾಲರನ್ನು ನೇಮಿಸುತ್ತಾನೆ. ಗುಡಿಗೆ ಹೋಗುತ್ತಿದ್ದ ಚಂದ್ರಹಾಸ ದಾರಿಯಲ್ಲಿ ಸಿಕ್ಕಿದ್ದರಿಂದ ಅವನನ್ನು ಅರಮನೆಗೆ ಕಳುಹಿಸಿ ಮದನನೇ ಚಂಡಿಕಾಲಯಕ್ಕೆ ಹೋಗಿ ಅಲ್ಲಿ ಚಂಡಾಲರಿಂದ ಹತನಾಗುತ್ತಾನೆ. ತನ್ನ ಯೋಜನೆ ತನ್ನ ವಂಶದ ಬೆಳಕನ್ನೇ ನುಂಗಿದುದನ್ನು ಕಂಡು ಎದೆಯೊಡೆದ ದುಷ್ಟಬುದ್ಧಿ ತನ್ನನ್ನು ತಾನೇ ಇರಿದುಕೊಳ್ಳುತ್ತಾನೆ.

ಲಕ್ಷ್ಮೀಶನಿಗೆ ವೈಷ್ಣವಭಕ್ತಿಯನ್ನು ಸಾರಲು ಚಂದ್ರಹಾಸನ ಕಥೆ ಒಳ್ಳೆಯ ಮಾಧ್ಯಮವಾಗಿದೆ. ಗಿರಿಯಮ್ಮನ ಸಾಂಗತ್ಯ ಸರಳವಾಗಿದ್ದು ಲಕ್ಷ್ಮೀಶನ ಹಿಂದೆಯೇ ಹೆಜ್ಜೆಹಾಕುತ್ತದೆ. ಕೆಲವು ಬದಲಾವಣೆಗಳೊಂದಿಗೆ ಹೊಸಗನ್ನಡ ನಾಟಕರೂಪದಲ್ಲಿರುವುದು ಕುವೆಂಪು ಅವರ ಚಂದ್ರಹಾಸ.

ದುಷ್ಟಶಕ್ತಿ ಸತ್ ಶಕ್ತಿಯನ್ನು ತುಳಿಯಲು ಯತ್ನಿಸುತ್ತದೆ. ಆದರೆ ಅಂತಿಮ ಜಯ ಸತ್ ಶಕ್ತಿಯದೇ ಎಂಬುದು ಈ ಕಥೆ ಪ್ರತಿಪಾದಿಸುವ ಮೌಲ್ಯ. ದೈವಕೃಪೆ ಚಂದ್ರಹಾಸನನ್ನು ರಕ್ಷಿಸುತ್ತದೆ. ದುಷ್ಟಬುದ್ಧಿ, ತನ್ನ ದುಷ್ಟಯೋಚನೆಯ ಫಲವನ್ನು ಅನುಭವಿಸುತ್ತಾನೆ. ಚಂದ್ರಹಾಸನ ಕಥೆಯ ಪ್ರಬಲ ಆಕರ್ಷಣೆ ಅದರ ನಾಯಕನ ಮುಗ್ಧತೆ, ನಿಷ್ಕಾರಣವಾಗಿ ದುಷ್ಟಬುದ್ಧಿ ಒಡ್ಡುವ ಅಡ್ಡಿಗಳು, ಚಂದ್ರಹಾಸನ ನಿರ್ಗತಿಕತೆ ಇತ್ಯಾದಿಗಳು ಕೇಳುವವರ ಕರುಣೆಯನ್ನು ಸೆಳೆದುಕೊಳ್ಳುತ್ತವೆ. ದುಷ್ಟಬುದ್ಧಿಯ ಹೋರಾಟ ವಿಧಿಯ ಮುಂದೆ ಸೋತು ಶರಣಾಗುತ್ತದೆ.

ಚಂದ್ರಹಾಸ ಒಳ್ಳೆಯತನದ ಪ್ರತೀಕ, ಭಕ್ತ, ದೈವಕೃಪೆಯುಳ್ಳವ, ದುಷ್ಟಬುದ್ಧಿ ದುಷ್ಟಶಕ್ತಿಯ ಪ್ರತೀಕ. ಪ್ರತಿಷ್ಠೆಯ ಮೋಹ, ರಾಜ್ಯದಾಹ, ಅಂತಸ್ಸತ್ತ್ವವದ ಕೊರತೆ-ಇವು ಅನೀತಿಯನ್ನು ಆಶ್ರಯಿಸುತ್ತವೆ ಎಂಬುದರ ಪ್ರಾಯೋಗಿಕ ನಿದರ್ಶನ ದುಷ್ಟಬುದ್ಧಿ. ಈ ಎರಡು ಶಕ್ತಿಗಳ ಸಂಘರ್ಷ, ಒಂದರ ಸೋಲು ಮತ್ತೊಂದರ ಗೆಲುವು ಈ ಕಥೆಯ ಕೇಂದ್ರ. ಕಥೆಯ ಘಟನೆಗಳೂ ಉಳಿದ ಪಾತ್ರಗಳೂ ನಾಯಕನಾದ ಚಂದ್ರಹಾಸನ ಔನ್ನತ್ಯವನ್ನು ಒಂದಲ್ಲ ಒಂದು ರೀತಿಯಲ್ಲಿ ಹೆಚ್ಚಿಸುವುವೇ ಆಗಿವೆ. ಒಟ್ಟು ಕಥೆಯ ಆವರಣ ತನ್ನ ಉದ್ದೇಶವನ್ನು ಸ್ಪಷ್ಟಗೊಳಿಸಲು ಅತಿ ಮಾನವಶಕ್ತಿಯ ರಕ್ಷಣೆಯಲ್ಲಿ ನಡೆಯುತ್ತದೆ. ಒಟ್ಟು ಕಥೆಯಲ್ಲಿ ಜನಪದ ಕಥೆಯ ಆಶಯಗಳನ್ನು ಹೇರಳವಾಗಿ ಗುರುತಿಸಬಹುದು.

(ಡಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ